ಬಾಹುಬಲಿ ಚಿತ್ರ ನಿರ್ದೇಶಕ ರಾಜಮೌಳಿ ಅವರ ಮುಂದಿನ ದೃಶ್ಯಕಾವ್ಯ RRR ನಾನಾ ಕಾರಣಗಳಿಂದ ಸಖತ್ ಸುದ್ದಿಯಲ್ಲಿದ್ದು, ಸಿನಿಮಾವನ್ನು ಆದಷ್ಟು ಬೇಗ ರಿಲೀಸ್ ಮಾಡುವುದಾಗಿ ಹೇಳಿದ್ದ ಚಿತ್ರತಂಡ ಇದೀಗಾ ಮುಂದುಡಿದೆ. ಆದರೆ ಸಾಕಷ್ಟು ನಿರೀಕ್ಷೆಗಳಿರುವ ಈ ಸಿನಿಮಾ ಬಿಡುಗಡೆಗೂ ಮುನ್ನ ಸುಮಾರು 400 ಕೋಟಿ ಗೂ ಅಧಿಕ ವ್ಯವಹಾರ ಕುದುರಿಸಿದ್ದು, ಬಾಹುಬಲಿ ಚಿತ್ರದ ದಾಖಲೆಯನ್ನು ಬದಿಗೊತ್ತಿದೆ.

ಹೌದು, 2 ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಚಿತ್ರದ ಅಪ್ಡೇಟ್ಗಳು ಒಂದೊಂದಾಗಿ ಹೊರ ಬೀಳುತ್ತಿದ್ದು, ಇದೀಗ ಮತ್ತೊಮ್ಮೆ ರಾಜಮೌಳಿ ಹೆಸರು ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಮುನ್ನಲೆಗೆ ಬಂದಿದೆ. ಟಾಲಿವುಡ್ನ ಇಬ್ಬರು ಯಂಗ್ ಅ್ಯಂಡ್ ಎನರ್ಜಿಟಿಕ್ ನಟರನ್ನು ಜೊತೆಗೂಡಿಸಿ “ಆರ್ಆರ್ಆರ್ “ ಎಂಬ ಸಿನಿಮಾವನ್ನು ಕೈಗೆತ್ತಿಕೊಂಡ ರಾಜಮೌಳಿ ಇದೀಗ ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿದ್ದಾರೆ. ಇಂತಹದೊಂದು ಸಾಹಸಕ್ಕೆ ಕೈ ಹಾಕಿರುವುದಕ್ಕೆ ತೆಲುಗು ಚಿತ್ರರಂಗ ರಾಜಮೌಳಿಗೆ ಜೈ ಎನ್ನುತ್ತಿದ್ದಾರೆ…

ಹೌದು, ‘ಆರ್ಆರ್ಆರ್’ ಚಿತ್ರದಲ್ಲಿ ಅಭಿನಯಿಸುತ್ತಿರುವುದು ತೆಲುಗು ಚಿತ್ರರಂಗದ ಎರಡು ಖ್ಯಾತ ಕುಟುಂಬಗಳ ನಟರು. ಒಂದೆಡೆ ನಂದಮೂರಿ ಕುಟುಂಬದಿಂದ ಜೂ. ಎನ್ಟಿಆರ್ ಇದ್ದರೆ, ಮತ್ತೊಂದೆಡೆ ಮೆಗಾ ಫ್ಯಾಮಿಲಿಯಿಂದ ರಾಮ್ ಚರಣ್ ತೇಜಾ ಇದ್ದಾರೆ. ಈ ಇಬ್ಬರು ನಟರಿಗೂ ತಮ್ಮದೆಯಾದ ಫ್ಯಾನ್ ಫಾಲೋವಿಂಗ್ ಇದೆ. ಈ ಇಬ್ಬರು ನಟರ ಒಂದು ಸಿನಿಮಾ ಬಿಡುಗಡೆಯಾದರೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ, ಜಗಳಗಳು ಸಾಮಾನ್ಯವಾಗಿತ್ತು.. ಇದೀಗ ಇವರಿಬ್ಬರೂ ಒಂದೇ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವುದು ಕೂಡ ಹೊಸ ಸೆನ್ಸೇಷನ್ ಹುಟ್ಟುಹಾಕಿದೆ.

ಇದರ ಮಧ್ಯೆ, RRR ಸಿನಿಮಾ ಈಗಾಗಲೇ 400 ಕೋಟಿಗೂ ಅಧಿಕ ಮೊತ್ತದ ಪ್ರಿ-ರಿಲೀಸ್ ವ್ಯವಹಾರ ನಡೆಸಿದ್ದು, ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಎನ್ನಲಾಗಿದೆ. ಈ ಹಿಂದೆ ಬಾಹುಬಲಿ 2 ಚಿತ್ರವು ಬಿಡುಗಡೆಗೂ ಮುನ್ನ ಸುಮಾರು 300 ಕೋಟಿ ವ್ಯವಹಾರ ಕುದುರಿಸಿತ್ತು. ಇದೀಗ ರಾಜಮೌಳಿ ಅವರ ಚಿತ್ರವೇ ಈ ಹಿಂದಿನ ದಾಖಲೆಯನ್ನು ಬದಿಗೊತ್ತಿದೆ.

ಟಾಲಿವುಡ್ ಮೂಲಗಳ ಮಾಹಿತಿ ಪ್ರಕಾರ RRR ಚಿತ್ರದ ಕರ್ನಾಟಕದ ಹಕ್ಕು 50 ಕೋಟಿಗೆ ಮಾರಾಟವಾಗಿದ್ದು, ಕೇರಳದಲ್ಲಿ 15 ಕೋಟಿಗೆ ಸೇಲ್ ಆಗಿದೆ. ಹಾಗೆಯೇ ವಿದೇಶದಲ್ಲಿನ ವಿತರಣಾ ಹಕ್ಕು 70 ಕೋಟಿಗೆ ಡೀಲ್ ಆಗಿದೆ. ಅದೇ ರೀತಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 215 ಕೋಟಿಗೆ RRR ವಿತರಣಾ ಹಕ್ಕು ಮಾರಾಟವಾಗಿದ್ದು, ಇದು ಟಾಲಿವುಡ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಎಂದು ತಿಳಿದು ಬಂದಿದೆ. ಇವೆಲ್ಲದರ ನಡುವೆ RRR ಭಾರತ ಚಿತ್ರರಂಗದ ಅತೀ ದೊಡ್ಡ ಪ್ಯಾನ್ ಸಿನಿಮಾ ಎಂಬ ದಾಖಲೆಯನ್ನು ಸ್ಥಾಪಿಸಲಿದೆ. ಏಕೆಂದರೆ ಆರ್ಆರ್ಆರ್ ಚಿತ್ರವನ್ನು ಇಂಗ್ಲಿಷ್ ಸೇರಿದಂತೆ 10 ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಬಾಹುಬಲಿ ಚಿತ್ರಗಳ ಮೂಲಕ ವಿಶ್ವ ಚಿತ್ರರಂಗ ಭಾರತದತ್ತ ನೋಡುವಂತೆ ಮಾಡಿರುವ ನಿರ್ದೇಶಕರು, ಈ ಬಾರಿ ವಿಶ್ವ ಸಿನಿ ಬಾಕ್ಸಾಫೀಸ್ ಮೇಲೆ ಕಣ್ಣಿಟ್ಟಿದ್ದಾರೆ.

ಸದ್ಯ ಶೇ.70 ರಷ್ಟು ಚಿತ್ರೀಕರಣವನ್ನು ಮುಗಿಸಿರುವ ಚಿತ್ರ ತಂಡ ಅಧ್ಭುತ ವಿಎಫ್ಎಕ್ಸ್ ವರ್ಕ್ನತ್ತ ಹೆಚ್ಚಿನ ಗಮನಹರಿಸಿದೆ. ಉಳಿದ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ಅದರೊಂದಿಗೆ ಆರ್ಆರ್ಆರ್ ಚಿತ್ರೀಕರಣಕ್ಕೆ ತೆರೆ ಬೀಳಲಿದ್ದು, ಆದಾಷ್ಟು ಬೇಗ ಸಿನಿಪ್ರಿಯರಿಗೆ ಸಿಹಿಸುದ್ದಿ ಕೊಡಲಿದೆ ಚಿತ್ರತಂಡ…